Saturday, November 16, 2013

ನನ್ನೊಲವಿನ ಒಲುಮೆಯೇ...



ಒಲವೇ ಇಂದ್ಯಾಕೋ
ನಿನ್ನ ಮಡಿಲಲಿ ನಾ ಹಾಗೆಯೇ,
ಮಲಗಿಬಿಡಬೇಕು ಎನಿಸುತಿದೆ ನನಗೆ.
ಕಾರಣವೂ ತಿಳಿದಿಲ್ಲ..
ಯಾವ ಕಾರಣಗಳೂ ಬೇಕಿಲ್ಲ.

ನಾ ನಿನ್ನ ಮಡಿಲಿನಲಿ
ನಿದ್ರಿಸುವ ಆ ಕ್ಷಣಗಳು
ಅಮ್ಮನ ಮಡಿಲನು ನೆನಪಿಸುತ್ತದೆ.
ನೀ ನನ್ನ ಅಪ್ಪಿ ಬಿಗಿಹಿಡಿದು
ಬೆನ್ನು ತಟ್ಟುವಾಗ 
ಅಪ್ಪನ ಪ್ರೀತಿಯ ನೆನಪಾಗುತ್ತದೆ.

ನೋವು-ನಲಿವಿನ ಈ
ಜೀವನದಲಿ ಸುಖಾಸುಮ್ಮನೆ
ನೂರೆಂಟು ಬೇಡದ ಯೋಚನೆಗಳು.
ನನ್ನ ತಲೆಯ ಸವರುತ್ತಾ,
ನೋವೆಲ್ಲಾ ಮರೆಸಿದೆ ಕಣೇ ನಿನ್ನ
ಆಯಸ್ಕಾತದಂಥ ಕೈಬೆರಳುಗಳು

ಒಲವಿಂದಲಿ ಮುತ್ತಿಟ್ಟು
ನಾ ಬದುಕುವ ಆಸೆಯನು
ಹೆಚ್ಚಿಸಿದೆ ನಿನ್ನ ತುಂಟ ಮುಂಗುರುಳು.
ಆ ನಿನ್ನ ಕಣ್ಣುಗಳೇ,
ಚಂದಿರನಂತೆ ಹೊಳೆಯುವಾಗ
ನನಗೆ ಹಗಲಲ್ಲೂ ನೀ ಬೆಳದಿಂಗಳು.

ಈ ಜಗದಲಿ ಅದೇನೆ ಇರಲಿ
ಅದ್ಯಾವುದರ ಪರಿವೇ ಬೇಡ,
ನನಗಿರಲಿ ನಿನ್ನ ಪ್ರೀತಿ ಹೀಗೆ ಅನವರತ.
ಸುಖಿಸೋಣ ನಾವು ಹೀಗೆ
ಕಣ್ಣಲ್ಲಿ ಕಣ್ಣಿಟ್ಟು ಪರಸ್ಪರ ಪ್ರೀತಿಸುತಾ

Tuesday, October 8, 2013

ದೇಶದ ಬೆನ್ನೆಲುಬು ರೈತ...



ನಮ್ಮ ದೇಶದ ಬೆನ್ನೆಲುಬು ರೈತ
ಹೀಗೆ ಸವೆಯುತ್ತಲೇ ಹೋದ ದುಡಿದು ಅನವರತ.

ಮುಂಜಾನೆಯಿಂದಲೇ ಹೊಲ ಹಸನು ಮಾಡಿ,
ಬಿತ್ತಿದ, ತಂದ ಕಳಪೆ ಬೀಜ ಕಾಡಿಬೇಡಿ,
ದಿನಗಳು ಕಳೆದರೂ ಹೊಲದಲಿ ಹಸಿರು ಕಾಣಲಿಲ್ಲ.
ಕೋಪದಲಿ, ಮಳೆರಾಯನಿಗೆ ಶಪಿಸುವುದು ತಪ್ಪಲಿಲ್ಲ.

ಇತ್ತ ಹೆಚ್ಚಾಗುತಲಿತ್ತು ದಿನೆದಿನೇ, 
ಸಾಲ ಕೊಟ್ಟ ಗೌಡನ ಕಿರಿಕಿರಿ ರೋಧನೆ,
ಓಟು ಹಾಕ್ಸಿಕೊಂಡ ಸರ್ಕಾರವೋ, 
ನೀಡುತ್ತಲಿದೇ ಬರೀ ಆಶ್ವಾಸನೆ,
ಯಾವುದಾದರೂ ಸರ್ಕಾರಿ ಸೌಲಭ್ಯ 
ಪಡೆಯೋಣವೆಂದರೆ, ಮಧ್ಯವರ್ತಿಯದೇ ದರ್ಬಾರು.
ಕೊನೆಗೂ ಕೈಸೇರಿತು ಹಸಿದ ನಾಯಿಗೆ ,
ಸಿಕ್ಕಂತೆ ಉಳಿದ ಚೂರುಪಾರು.

ಅವನ ಬದುಕಂತೂ ಆಗುತಿದೆ, ಚಿಂದಿಚಿಂದಿ,
ಅವನುಟ್ಟ, ಮಾಸಿದ ತ್ಯಾಪೆ ಅಂಗಿಯಂತೆ
ಬಿಸಿಲು-ಧೂಳು ಕೂತ ಟವೆಲ್ ಕೊಡವಿ ಮೇಲೆದ್ದು,
ಮನೆಗೆ ಹೊರಟ ಬಡಕಲು ಯೋಗಿಯಂತೆ. 

ಗಂಜಿಕಾಣದ ಹೊಟ್ಟೆಗೆ ತಣ್ಣೀರು ಬಟ್ಟೆ,
ದುಸ್ಥಿತಿಗೆ ನೊಂದು ಸಣಕಲಾಗುತ್ತಲೇ ಹೋದ. 
ಆ ದಿನ ಸಂಜೆ, ಮುಂಗಾರಿನ ಮಳೆ ಸುರಿವ ಮುನ್ನ,
ಬಡಿದ ಸಿಡಿಲಿಗೆ ಸಿಕ್ಕಿ.. ಪಾಪ..!! ಸತ್ತೇಹೋದ..!!!


Thursday, September 12, 2013

ನಿನ್ನ ಅನುರಾಗ

ನಿನ್ನ ಅನುರಾಗ, ನನಗೆ ಬೇಕೀಗ,
ನಾ ಕಾಣೇ, ಏಕೋ ಏನೋ..
ಈ ಮನಸಲಿ ಎಂಥದೋ ಹರುಷ.
ನೀ ಬಳಿಯಿದ್ದರೆ ಓ ಹುಡುಗಾ..!!!

ನನ್ನ ಕೈಬಳೆಯ ಸದ್ದಲಿ
ಮುಡಿದ ಮಲ್ಲಿಗೆಯ ಕಂಪಲಿ,
ಹುಣ್ಣಿಮೆಯ ಚಂದಿರನಿರುವ ಇರುಳಲಿ,
ಉಣಬಡಿಸುವೆ ಸವಿಪ್ರೀತಿಯ ನಿನಗಾ..!!

ಹುಡುಗಾ ನನ್ನೆದುರು ನೀನಿಲ್ಲ,
ಆದರೂ ನೀ ಬಿಡದೇ ಕಾಡುವೆಯಲ್ಲ,
ಬಲು ತುಂಟ, ರಸಿಕ, ನೀ ನನ್ನ ನಲ್ಲ,
ಸವಿನುಡಿಗೆ ಸೋತು, ಕೆಂಪಾಯ್ತು ಕೆನ್ನೆ ನನಗಾ..!!

ಬರುವಾಗ ಮಳೆಹನಿಯು ಚಿಟಪಟ ಎಂದು
ನನಗಾಗ ಆಸೆ, ನಿನ್ನ ಜೊತೆ ಸಾಗಬೇಕೆಂದು,
ಒಲವಿನಲಿ ನಾವು ಮಳೆಯಲಿ ಜೊತೆಯಲಿ
ಇನ್ಯಾವ ಸ್ವರ್ಗ ಬೇಕು, ನೀ ಸನಿಹವಿರುವಾಗ.

Thursday, May 2, 2013

ಮನಸಾರೇ..



[ ಮನಸಾರೇ ಚಿತ್ರದ " ನಾ ನಗುವ ಮೊದಲೇನೇ" ಎಂಬ ಹಾಡಿಗೆ ಬರೆದ ಹೊಸ ಸಾಹಿತ್ಯ ]


ನೀ ನಗಲು ನನಗಾಗಿ, 
ಬಚ್ಚಿಡುವೆ ನಿನ್ನ,
ನನ್ನ ಎದೆಯೊಳಗೆ.

ಆ ನಗುವ ಕಂಡಾಗ
ಅದು ಯಾಕೋ ಏನೋ
ಖುಷಿ ನನ್ನೊಳಗೆ,

ಆ ನಿನ್ನ ನಗುವನ್ನು 
ದಿನಾ ಕಂಡೆನಾ
ನನ್ನ ಕನಸೊಳಗೆ

ಆ ಪ್ರೀತಿ ಕ್ಷಣವನು
ನೆನೆದೆನು ಪದೆಪದೇ
ಮನದೊಳಗೆ

ಒಂದು ಬಾರಿ, 
ಬಾರೇ ಮೆಲ್ಲಗೆ,
ಕಾಯುವೇ
ನಿನ್ನ ಹೂನಗೆಗೆ..

ಹೇಳಿದೆ ನನಗೆ, 
ಹೊಸಕವಿತೆ, 
ನಿನ್ನಯ ಕಣ್ಣು. 

ಈ ಮೌನವೇ
ಸಾಕಾಗಿದೆ ನನಗಿನ್ನು.

ನಲಿದಿದೆ ಮನವು, 
ಕವಿತೆಯ ಕಂಡು.
ನನ್ನ ರಾಣೀ ನೀನು. 

ನಾನು ನಿನ್ನ ಜೊತೆಗಿರಲು,
ಚಿಂತೆ ಯಾಕೇ ನನ್ನೊಲವೇ?

ಸಂತೋಷದಲಿ ನಿನ್ನಯ
ಹೆಸರ ಮಿಡಿದಿದೆ ಹೃದಯ

ಇನ್ನಾದರು ಬಾ ಅಪ್ಪಿಕೋ,
ಬಿಟ್ಟು ಈ ಸಂಶಯ

ಬರೀ ಕನಸಿನಲೇ, 
ಕಾಡುವೇ ಏಕೆ 
ನನ್ನನು ನೀನು

ಬಾರೇ, ರಾಣೀ ನೀನು
ನನ್ನ ಪ್ರೀತಿ ಅರಮನೆಗೆ

ನೀ ನಗಲು ನನಗಾಗಿ, 
ಬಚ್ಚಿಡುವೆ ನಿನ್ನ,
ನನ್ನ ಎದೆಯೊಳಗೆ.....

Friday, April 5, 2013

ಬಾರಯ್ಯ ಭಾಸ್ಕರ



ಬಾರಯ್ಯ ಭಾಸ್ಕರ
ಜಗ ಬೆಳಗೊ ದಿನಕರ
ಇರುಳಿನ ತಂಪಿನಲಿ ಬೆಚ್ಚಗೆ
ಮಲಗಿದ್ದ ಜಡತೆಯನು
ಒಡೆದೋಡಿಸು ಬಾರೋ,
ಕತ್ತಲ ಸರಿಸಿ, ಬೆಳಕನು ಹರಿಸಿ,
ನಿನ್ನೆ ಮೊನ್ನೆಯ ನೋವನು
ನೀ ಮರೆಸು ಬಾರೋ
ಕೆಂಪಾದ ನಿನ್ನ ಹೊಂಗಿರಣದಿಂದ
ನರನಾಡಿಯಲ್ಲಿ ಹೊಸಚೈತನ್ಯ ತಾರೋ

ಸಂಜೆಯಾಗುವವರೆಗೂ
ಈ ಉತ್ಸಾಹ ಬತ್ತದಿರಲಿ.
ನನ್ನ ಬೆವರ ಹರಿಸಿ,
ಮಾಡಿದ ದುಡಿಮೆಯಲಿ,
ಈ ಚೈತನ್ಯ ನಲುಗದಿರಲಿ.
ನಾಳಿನ ನಿನ್ನ ದರುಷನಕೆ,
ಕಾದಿವೇ ಈ ಕಣ್ಣುಗಳು.
ಆ ಕನಸಿನಲೇ ನಾ
ಕಳೆಯುತಿರುವೆ ಇರುಳು.
ಬಾರಯ್ಯ ಭಾಸ್ಕರ
ದಿನ ಬೆಳಗೋ ದಿನಕರ

Saturday, February 23, 2013

ಹಲೋ.. ನಾಗರೀಕರೇ..


ಹಲೋ ನಾಗರೀಕರೇ..!!!
ಯಾರಾದರೂ ಇದ್ದೀರಾ..?
ಇದ್ದರೆ, ನಮ್ಮ ನೋವ ಕೇಳಿ..

ನಮಗೂ ಗೊತ್ತು ಬಿಡಿ,
ಬಲು ಬಿಜಿ ಲೈಫು ನಿಮ್ಮದು.
ಬಗೆಹರಿಯದ ಗಡಿಬಿಡಿ,
ಅವರವರ ಪಾಡು ಅವರದು.

ರಣಕಲಿಗಳ ರಕ್ತ ಕುಡಿದು,
ಸ್ವತಂತ್ರವಾಯ್ತು ಭಾರತ.
ಅನ್ಯಾಯವೇ ಮೆರೆಯುತಿಹುದು,
ಸಿಕ್ಕ ಸ್ವಾತಂತ್ರ್ಯವೂ ವ್ಯರ್ಥ.

ನಾರಿಯನ್ನು ಪೂಜಿಸಿದ
ಮಹಾನ್ ದೇಶ ನಮ್ಮದು.
ಶಾಂತಿ-ಸಂಸ್ಕೃತಿಯನು
ಕಾಪಾಡೋ ಹೊಣೆ ನಮ್ಮದು.

ಹಗಲು -ರಾತ್ರಿ ಹರಾಜಾಯ್ತು,
ನಮ್ಮ ಭಾರತಾಂಬೆ ಮಾನ.
ಭಯವಿಲ್ಲದೇ ಶುರುವಾಯ್ತು
ಈ ಅತ್ಯಾಚಾರಿಗಳ ಯಾನ.

ತಾಯಿ ಕರುಳು ಕೂಗುತಿದೆ,
ಮಗಳು ಮನೆಗೆ ಬರುವ ತನಕ.
ತರುಣಿಯ ಭಯ ಹೆಚ್ಚಾಗಿದೆ,
ಅವಳು, ಮನೆ ಸೇರುವ ತನಕ.

ಅಪ್ಪ-ಅಣ್ಣನಂತೆ ನೀವು,
ಪ್ರೀತಿ ತೋರದಿದ್ದರೂ;
ಒಮ್ಮೆ ನೀವಾಗಿ, ನಾವು
ಬಯಸೋ ನಾಗರೀಕರು.

ಸಮಾಜದ ಈ ಕೆಟ್ಟ ಸ್ಥಿತಿಗೆ
ಈ ನಿಮ್ಮ ಮೌನ ಕಾರಣ.
ಇನ್ನಾದರೂ ನಡೆಯಲಿ,
ನಾಗರೀಕತೆಯ ಅನಾವರಣ.