ಹಲೋ ನಾಗರೀಕರೇ..!!!
ಯಾರಾದರೂ ಇದ್ದೀರಾ..?
ಇದ್ದರೆ, ನಮ್ಮ ನೋವ ಕೇಳಿ..
ನಮಗೂ ಗೊತ್ತು ಬಿಡಿ,
ಬಲು ಬಿಜಿ ಲೈಫು ನಿಮ್ಮದು.
ಬಗೆಹರಿಯದ ಗಡಿಬಿಡಿ,
ಅವರವರ ಪಾಡು ಅವರದು.
ರಣಕಲಿಗಳ ರಕ್ತ ಕುಡಿದು,
ಸ್ವತಂತ್ರವಾಯ್ತು ಭಾರತ.
ಅನ್ಯಾಯವೇ ಮೆರೆಯುತಿಹುದು,
ಸಿಕ್ಕ ಸ್ವಾತಂತ್ರ್ಯವೂ ವ್ಯರ್ಥ.
ನಾರಿಯನ್ನು ಪೂಜಿಸಿದ
ಮಹಾನ್ ದೇಶ ನಮ್ಮದು.
ಶಾಂತಿ-ಸಂಸ್ಕೃತಿಯನು
ಕಾಪಾಡೋ ಹೊಣೆ ನಮ್ಮದು.
ಹಗಲು -ರಾತ್ರಿ ಹರಾಜಾಯ್ತು,
ನಮ್ಮ ಭಾರತಾಂಬೆ ಮಾನ.
ಭಯವಿಲ್ಲದೇ ಶುರುವಾಯ್ತು
ಈ ಅತ್ಯಾಚಾರಿಗಳ ಯಾನ.
ತಾಯಿ ಕರುಳು ಕೂಗುತಿದೆ,
ಮಗಳು ಮನೆಗೆ ಬರುವ ತನಕ.
ತರುಣಿಯ ಭಯ ಹೆಚ್ಚಾಗಿದೆ,
ಅವಳು, ಮನೆ ಸೇರುವ ತನಕ.
ಅಪ್ಪ-ಅಣ್ಣನಂತೆ ನೀವು,
ಪ್ರೀತಿ ತೋರದಿದ್ದರೂ;
ಒಮ್ಮೆ ನೀವಾಗಿ, ನಾವು
ಬಯಸೋ ನಾಗರೀಕರು.
ಸಮಾಜದ ಈ ಕೆಟ್ಟ ಸ್ಥಿತಿಗೆ
ಈ ನಿಮ್ಮ ಮೌನ ಕಾರಣ.
ಇನ್ನಾದರೂ ನಡೆಯಲಿ,
ನಾಗರೀಕತೆಯ ಅನಾವರಣ.